ನಮೋ ರಾಮ ವ್ರತ ಪ್ರಾಣ ಪ್ರತಿಷ್ಠಾಪನೆಗಾಗಿ ಪ್ರಧಾನಿ ಮೋದಿ 11 ದಿನ ನಿಯಮಾನುಷ್ಠಾನ ರಾಮ ಮಂದಿರದ ಪವಿತ್ರ ಕಾರ್ಯಕ್ಕೆ ಶಾಸ್ರೋಕ್ತ ಪೂರ್ವವಿಧಿಗಳ ಆಚರಣೆ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಕಾಲಾರಾಮ ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಸಂತ ಏಕನಾಥ್ ವಿರಚಿತ 'ಭಾವಾರ್ಥ ರಾಮಾಯಣ'ದ ಪಾರಾಯಣದ ವೇಳೆ ಭಜನೆಯಲ್ಲಿ ತಲ್ಲೀನರಾದರು

ಹೊಸದಿಲ್ಲಿ: ಜನವರಿ 22ರಂದು ಅಯೋಧ್ಯೆಯಲ್ಲಿ
ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಭರ್ಜರಿ ಸಿದ್ಧತೆ ನಡೆದಿದ್ದು, ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿರುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮಕ್ಕೆ ಇನ್ನು 11 ದಿನಗಳಷ್ಟೇ ಬಾಕಿ ಇದೆ. ಇದರ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಿಂದ 11 ದಿನಗಳ 'ರಾಮ ವ್ರತ' ಕೈಗೊಂಡಿದ್ದಾರೆ.

ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕರು ಆಚರಿಸುವ ಹಾಗೂ ಧರ್ಮ ಗ್ರಂಥ ಗಳಲ್ಲಿ ಸೂಚಿಸಲಾದ ಎಲ್ಲಾ ಕಠಿಣ ನಿಯಮ-ನಿಷ್ಠೆಗಳನ್ನು ತಾವೂ ಆಚರಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.

ರಾಮಾಯಣದ ಐತಿಹ್ಯ ಹೊಂದಿರುವ ಮಹಾರಾಷ್ಟ್ರದ ನಾಸಿಕ್‌ನ ಕಾಲಾರಾಮ ಮಂದಿರದಲ್ಲಿ ಶುಕ್ರವಾರ ವಿಶೇಷ ಪೂಜೆ ಮತ್ತು ಪ್ರಾರ್ಥನೆ ನೆರವೇರಿಸಿದ ಅವರು, ಈ 'ವ್ರತ' ಆಚರಣೆ ಆರಂಭಿಸಿದ್ದಾರೆ. ಪ್ರಧಾನಿ ಮೋದಿ ತಮ್ಮ 'ಎಕ್ಸ್' ಖಾತೆಯಲ್ಲಿ ಆಡಿಯೊ ಸಂದೇಶದ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ.
#ತಲೆಮಾರುಗಳ ಕನಸು ನನಸು: 
''ನಾನು ಅತ್ಯಂತ ಭಾವ ಪರವಶನಾಗಿದ್ದೇನೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಇಂತಹ ಭಾವನೆಗಳನ್ನು ಅನುಭವಿಸುತ್ತಿದ್ದೇನೆ. ನನ್ನ ಭಾವನೆಗಳ ತೀವ್ರತೆ, ಈ ಆಂತರಿಕ ಪ್ರಯಾಣದ ಅನುಭವವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಾಗುತ್ತಿಲ್ಲ. ಹಲವು ತಲೆಮಾರುಗಳು ತಮ್ಮ ಹೃದಯದಲ್ಲಿ ಒಂದು ಸಂಕಲ್ಪದಂತೆ ಕಂಡಿದ್ದ ಕನಸೊಂದು ನನಸಾಗುವ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದೇನೆ. ಇದು ಎಲ್ಲಾ ಭಾರತೀಯರು ರಾಮನ ಭಕ್ತರು ಮತ್ತು ಈ ಐತಿಹಾಸಿಕ ಕ್ಷಣಕ್ಕಾಗಿ ಕಾತರದಿಂದ ನಿರೀಕ್ಷಿಸುತ್ತಿರುವ ಪ್ರತಿಯೊಬ್ಬರಿಗೂ ಅತ್ಯಂತ ಪವಿತ್ರ ಸಂದರ್ಭ. ಇದರಲ್ಲಿ ಭಾಗಿಯಾಗಲು ನಾನು ಜನರ ಆಶೀರ್ವಾದ ಕೋರುತ್ತಿದ್ದೇನೆ,'' ಎಂದಿದ್ದಾರೆ.

#ನಾನೊಂದು ಸಾಧನ ಮಾತ್ರ:
 “ಅಯೋಧ್ಯೆಯಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಇನ್ನು ಕೇವಲ 11 ದಿನಗಳು ಉಳಿದಿವೆ. ಈ ಪವಿತ್ರ ಸಂದರ್ಭಕ್ಕೆ ನಾನು ಸಾಕ್ಷಿಯಾಗುತ್ತಿರುವುದು ನನ್ನ ಪಾಲಿನ ಸೌಭಾಗ್ಯ. ಪ್ರಾಣ ಪ್ರತಿಷ್ಠಾಪನೆಯ ಪವಿತ್ರ ಕಾರ್ಯದ ವೇಳೆ ಭಾರತದ ಎಲ್ಲಾ ನಾಗರಿಕರನ್ನು ಪ್ರತಿನಿಧಿಸಲು ದೇವರು ನನ್ನನ್ನು ಒಂದು ಸಾಧನವಾಗಿ ಆಯ್ಕೆ ಮಾಡಿದ್ದಾನೆ.ಹೀಗಾಗಿ ಇಂದಿನಿಂದ 11 ದಿನಗಳ ವಿಶೇಷ ವಿಧಿ-ವಿಧಾನವನ್ನು ನಾನು ಆಚರಿಸುತ್ತಿದ್ದೇನೆ," ಎಂದು ಮೋದಿ ಹೇಳಿದ್ದಾರೆ
#ಏನೆಲ್ಲಾ ನಿಯಮ ನಿಷ್ಠೆ?

# 11 ದಿನಗಳ ಕಾಲ 'ಯಮ-ನಿಯಮ'ಗಳ ಕಟ್ಟುನಿಟ್ಟಿನ ಪಾಲನೆ
#ಸಾಧ್ಯವಾದರೆ ನೆಲದ ಮೇಲೆ ಮಲಗುವುದು
# ಸೂರ್ಯೋದಯಕ್ಕೆ ಮುನ್ನ ಬ್ರಾಹ್ಮ ಮುಹೂರ್ತದಲ್ಲಿ ಏಳುವುದು
# ಯೋಗ, ಧ್ಯಾನ, ಜಪಗಳ ಆಚರಣೆ; ಧರ್ಮಗ್ರಂಥಗಳ ಅಧ್ಯಯನ
#ಮಿತಾಹಾರ ಅಥವಾ ಸಾತ್ವಿಕ ಆಹಾರಗಳನ್ನು ಮಾತ್ರ ಸೇವಿಸುವುದು
# ದಿನದಲ್ಲಿ ಕೊಂಚ ಸಮಯ ಮೌನವ್ರತ ಆಚರಣೆ

#*"ಧಾರ್ಮಿಕ ಮುಖಂಡರ ಮೆಚ್ಚುಗೆ"*

11 ದಿನಗಳ ವ್ರತ ಕೈಗೊಂಡ ಪ್ರಧಾನಿ ಮೋದಿ ಅವರ ನಿರ್ಧಾರವನ್ನು ವಿವಿಧ ಧಾರ್ಮಿಕ ಮುಖಂಡರು ಶ್ಲಾಘಿಸಿದ್ದಾರೆ. ಈ ಮಧ್ಯೆ, ಪ್ರಧಾನಿಯವರ ನಿಯಮಾಚಾರಣೆ ಯಶಸ್ಸಿಗೆ ಹಾರೈಸಿ ವಿವಿಧ ಧಾರ್ಮಿಕ ಮುಖಂಡರು ಹರಿದ್ವಾರದಲ್ಲಿ ಶುಕ್ರವಾರ ಹವನ ನೆರವೇರಿಸಿದ್ದಾರೆ.

Comments