"ಇನ್ಫೋಸಿಸ್‌ನಲ್ಲಿ ಈ ಸಲವೂ ಇಲ್ಲ ಕ್ಯಾಂಪಸ್ ಸೆಲೆಕ್ಷನ್"

ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಬೇಸರದ ಸುದ್ದಿ
#ಎಕನಾಮಿಕ್ ಟೈಮ್ಸ್:
 ಮುಂಬಯಿ ಉದ್ಯೋಗದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಬೆಂಗಳೂರು ಮೂಲದ ಐಟಿ ಕಂಪನಿ ಇನ್ಫೋಸಿಸ್ ಮತ್ತೆ ನಿರಾಸೆ ಮೂಡಿಸಿದೆ. ಡಿಸೆಂಬರ್ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿರುವ ಕಂಪನಿಯು, ಸದ್ಯಕ್ಕೆ ಯಾವುದೇ ಕ್ಯಾಂಪಸ್ ಸೆಲೆಕ್ಷನ್ ಮಾಡುವುದಿಲ್ಲ ಎಂದು ಹೇಳಿದೆ.

ದೇಶದ ಪ್ರಮುಖ ಐಟಿ ಕಂಪನಿಯಾದ ಇನ್ಫೋಸಿಸ್, ಈ ರೀತಿಯ ಹೇಳಿಕೆ ನೀಡಿರುವುದು ಯುವಕರ ಉದ್ಯೋಗಾವಕಾಶಗಳ ಮೇಲೆ ನೇರ ಪರಿಣಾಮ ಬೀರಲಿದೆ. ಕಂಪನಿಯು ಕಳೆದ ತ್ರೈಮಾಸಿಕದಲ್ಲಿಯೂ ಕ್ಯಾಂಪಸ್ ನೇಮಕಾತಿ ಮಾಡಿರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸುತ್ತಿರುವ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ నిలంజనా ರಾಯ್, "ಕಂಪನಿಯು ಪ್ರಸ್ತುತ ಪ್ಲೆಕ್ಸಿನೇಮಕಾತಿ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಅಗತ್ಯಕ್ಕೆ ತಕ್ಕಂತೆ ಹೊಸ ಜನರನ್ನು ನೇಮಿಸಿಕೊಳ್ಳುತ್ತಿದೆ. ಕಂಪನಿಗೆ ಹೆಚ್ಚಿನ ಉದ್ಯೋಗಿಗಳ ಅಗತ್ಯವಿದ್ದರೆ ಕ್ಯಾಂಪಸ್‌ನ ಹೊರಗೆ ಕಾರ್ಯಕ್ರಮಗಳನ್ನು ನಡೆಸಿ ಜನರನ್ನು ನೇಮಿಸಿಕೊಳ್ಳಲಿದೆ,'' ಎಂದಿದ್ದಾರೆ.

ಇನ್ಫೋಸಿಸ್ ಕಂಪನಿಯ ಉದ್ಯೋಗಿಗಳ ಸಂಖ್ಯೆ ದೊಡ್ಡ ಮಟ್ಟಕ್ಕೆ ಕುಸಿದಿದೆ. 2023-24ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆ 6,101 ರಷ್ಟು ಕಡಿಮೆಯಾಗಿದೆ. ಈ ಹಿಂದೆ ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿ ಉದ್ಯೋಗಿಗಳ ಸಂಖ್ಯೆ 7,530ರಷ್ಟು ಕಡಿಮೆಯಾಗಿತ್ತು. 2023ರ ಡಿಸೆಂಬರ್ 31ರ ಅಂತ್ಯಕ್ಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಉದ್ಯೋಗಿಗಳ ಸಂಖ್ಯೆ 3,22,663 ಕ್ಕೆ ಇಳಿಕೆಯಾಗಿದೆ

ಇನ್ಫೋಸಿಸ್ ಲಾಭ ಇಳಿಕೆ: ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 6,106 ಕೋಟಿ ರೂ.ಗಳಿಗೆ ಇಳಿಕೆಯಾಗಿದ್ದು, ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.7.3ರಷ್ಟು ಕುಸಿತ ಕಂಡಿದೆ. ಈ ಹಿಂದಿನ ಸೆಪ್ಟೆಂಬರ್ ತ್ರೈಮಾಸಿಕದಲ್ಲೂ ಕಂಪನಿಯ ಲಾಭ ಶೇ. 1.7ರಷ್ಟು ಇಳಿಕೆಯಾಗಿತ್ತು.
#ಲಾಭ ಕುಸಿದರೂ ಷೇರು ಜಿಗಿತ:
 ಡಿಸೆಂಬರ್ ತೈಮಾಸಿಕದಲ್ಲಿ ಇನ್ಫೋಸಿಸ್ ಲಾಭ ಇಳಿಕೆಯಾದರೂ, ಶುಕ್ರವಾರ ಷೇರು ಭಾರಿ ಏರಿಕೆ ಕಂಡಿದೆ. ಕಂಪನಿ ಷೇರು ಶೇ.8.08 ಅಥವಾ 120.80 ರೂ. ಮೇಲೇರಿದ್ದು, 1,615 ರೂ.ನಲ್ಲಿ ವಹಿವಾಟು ಕೊನೆಗೊಳಿಸಿದೆ. ಇನ್ನು ಟಿಸಿಎಸ್‌ ಷೇರು ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, 146.35 ರೂ. ಅಥವಾ ಶೇ.3.92ರಷ್ಟು ಮೇಲೇರಿ 3,881.90 ರೂ.ನಲ್ಲಿ ವಾರದ ವಹಿವಾಟು ಮುಗಿಸಿದೆ.

#ಟಿಸಿಎಸ್‌ನಿಂದ ಗುಡ್ ನ್ಯೂಸ್:
ದೇಶದ ದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) 2024-25ನೇ ಆರ್ಥಿಕ ವರ್ಷದಲ್ಲಿ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಿರುವುದಾಗಿ ಹೇಳಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಟಿಸಿಎಸ್‌ ಒಟ್ಟು ಉದ್ಯೋಗಿಗಳ ಸಂಖ್ಯೆ 5,680ರಷ್ಟು ಕುಸಿತ ಕಂಡಿದೆ. ಡಿಸೆಂಬರ್ 31, 2023ರ ಅಂತ್ಯಕ್ಕೆ ಟಾಟಾ ಒಡೆತನದ ಈ ಕಂಪನಿಯಲ್ಲಿ ಒಟ್ಟು 6,03,305 ಜನರು ಕೆಲಸ ಮಾಡುತ್ತಿದ್ದಾರೆ.

Comments