ಸೋನು ಶ್ರೀನಿವಾಸ್ ಗೌಡಗೆ ಇರೀತಿ ಆಗಲು ಕಾರಣ ವೇನು ಗೊತ್ತೇ......?
#ದಾಖಲೆ ಇಲ್ಲದೆ ಇರುವುದು ಕಾನೂನುಬಾಹಿರ ಎಂದ ಅಧಿಕಾರಿಗಳು#
ಕಾನೂನುಬಾಹಿರವಾಗಿ ಹೆಣ್ಣು ಮಗು ದತ್ತು ಪಡೆದ ಆರೋಪದ ಉರುಳಿನಲ್ಲಿ ಸಿಲುಕಿರುವ ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ (28) ಅವರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ (ಡಿಸಿಪಿಯು) ಕಾನೂನು ಪರಿವೀಕ್ಷಣಾ ಅಧಿಕಾರಿ ಜೆ. ಗೀತಾ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿ ಕೊಂಡು ಸೋನು ಶ್ರೀನಿವಾಸ್ ಗೌಡರನ್ನು ಪೊಲೀಸರು ಬಂಧಿಸಲಾಗಿದೆ. ಸೋನು ಜತೆಯಲ್ಲಿದ್ದ ಎಂಟು ವರ್ಷದ ಹೆಣ್ಣು ಮಗುವನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ವಶಕ್ಕೆ ಪಡೆದು ರಕ್ಷಣೆ ಒದಗಿಸಿದ್ದಾರೆ.
ಸೋನು ವಿರುದ್ಧ ಬಾಲನ್ಯಾಯ ಕಾಯಿದೆ, ಮಾನವ ಕಳ್ಳಸಾಗಣೆ ಆರೋಪಗಳಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಸೋನು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆ ಸಲುವಾಗಿ ಮಾ.25ರವರೆಗೆ ಕಸ್ಟಡಿಗೆ ಪಡೆದಿದ್ದಾರೆ.
ಬಯಲಾಗಿದ್ದು ಹೇಗೆ?: ಸಾಮಾಜಿಕ ಜಾಲತಾಣಗಳಲ್ಲಿ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿರುವ ಸೋನು ಗೌಡ, ಹೆಣ್ಣು ಮಗುವಿನ ಜತೆ ಅಡುಗೆ ತಯಾರಿ, ಪ್ರವಾಸ ಸೇರಿದಂತೆ ಹಲವು ವಿಚಾರಗಳ ಕುರಿತು ವಿಡಿಯೊ ಮಾಡಿ ಅಪ್‌ಲೋಡ್ ಮಾಡುತ್ತಿದ್ದರು. ಈ ವಿಚಾರಕ್ಕೆ ನೆಟ್ಟಿಗರು ಮಗುವಿನ ಕುರಿತು ಪ್ರಶ್ನಿಸುತ್ತಿದ್ದರು. ಈ ಬೆನ್ನಲ್ಲೇ ಮಗುವಿನ ಜತೆ ಪುನಃ ವಿಡಿಯೊ ಮಾಡಿರುವ ಸೋನು, "ಮಗುವನ್ನು ದತ್ತು ಪಡೆದಿದ್ದು, ನಾನೇ ಸಾಕುತ್ತಿದ್ದೇನೆ. ಅವಳು ನನ್ನ ತಂಗಿ. ಅವಳ ವಿದ್ಯಾಭ್ಯಾಸ ಹಾಗೂ ಮುಂದಿನ ಜೀವನದ ಬಗ್ಗೆ ನಾನೇ ನೋಡಿಕೊಳ್ಳುತ್ತೇನೆ,'' ಎಂದು ವಿವರಣೆ ನೀಡಿದ್ದ ವಿಡಿಯೊವನ್ನು ಮಾ.2ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಲಕ್ಷಾಂತರ ಜನ ಈ ವಿಡಿಯೊ ವೀಕ್ಷಿಸಿದ್ದರು.
ದತ್ತು ಪಡೆದ ಮಗುವಿನ ಹಿನ್ನೆಲೆ ಬಹಿರಂಗಪಡಿಸಿದ ವಿಡಿಯೊ ಕುರಿತ ಮಾಹಿತಿ ರಕ್ಷಣಾ ಘಟಕದ ಅಧಿಕಾರಿ ಜೆ.ಗೀತಾ ಅವರಿಗೆ ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ಸೋನು ಅವರು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್‌ಎ), ರಾಜ್ಯ ದತ್ತು ಪ್ರಾಧಿಕಾರ (ಎಸ್ ಎಆರ್‌ಎ) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ದತ್ತು ಪಡೆದಿದ್ದಾರೆಯೇ ಎಂಬುದನ್ನು ಪರಿಶೀಲಿಸಿದಾಗ ನೋಂದಣಿಯೇ ಆಗಿರಲಿಲ್ಲ.
ಈ ಸಂಬಂಧ ರಾತ್ರಿಯೇ ಗೀತಾ ಅವರು ಸೋನು ಗೌಡ ಅವರ ವಿಚಾರಣೆ ನಡೆಸಿದ್ದರು. ಆದರೆ, ಮಗುವಿನ ದತ್ತು ಪಡೆದ ಕಾನೂನು ಪ್ರಕ್ರಿಯೆ ದಾಖಲೆ ಹಾಜರುಪಡಿಸುವಲ್ಲಿ ಸೋನು ಕೂಡ ವಿಫಲವಾಗಿ . ದ್ದರು. ಈ ಬೆನ್ನಲ್ಲೇ ಗೀತಾ, ಸೋನು ವಿರುದ್ಧ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೋನು ಹೇಳುವುದೇನು?: "ನಾನು ವಾಸವಿರುವ ಅಪಾರ್ಟ್‌ಮೆಂಟ್ ಪಕ್ಕದಲ್ಲಿಯೇ ರಾಯಚೂರು ಮೂಲದ ದಂಪತಿ ಎಂಟು ವರ್ಷದ ಮಗಳ ಜತೆ ವಾಸವಿದ್ದರು. ಮಗುವಿನ ಚುರುಕುತನ ಹಾಗೂ ಬುದ್ದಿವಂತಿಕೆ ನನ್ನ ಗಮನಸೆಳೆದಿತ್ತು. ಮಗುವಿಗೆ ಹುಶಾರಿಲ್ಲದಿದ್ದಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆ. ಆನಂತರ ಇಡೀ ಕುಟುಂಬದ ಜತೆ ಅನ್ನೋನ್ಯತೆ ಬೆಳೆದು ಮಗು ಹೆಚ್ಚು ಹಚ್ಚಿಕೊಂಡಿತ್ತು. ಎರಡು ತಿಂಗಳ ಹಿಂದೆ ತಂದೆ- ತಾಯಿ ಜತೆ ಮಗುವೂ ಊರಿಗೆ ಹೋಗಿತ್ತು. ಆದರೆ, ಮಗು ನನ್ನನ್ನು ಬಿಟ್ಟಿರಲಾರದೆ ಹಠ ಮಾಡುತ್ತಿದೆ ಎಂದು ಅವರ ಪೋಷಕರು ಹೇಳಿದ್ದರು. ಹೀಗಾಗಿ, ನಾನೇ ಮಗುವನ್ನು ಸಾಕಿಕೊಳ್ಳಲು ಅವರ ಪೋಷಕರ ಒಪ್ಪಿಗೆ ಮೇರೆಗೆ ಕರೆತಂದು ಆರೈಕೆ ಮಾಡುತ್ತಿದ್ದೇನೆ. ದತ್ತು ಪಡೆಯುವ ಕಾನೂನು ಪ್ರಕ್ರಿಯೆಗಳನ್ನು ಪಾಲಿಸುವ ಹಂತದಲ್ಲಿದ್ದೆ,' " ಎಂದು ವಿಚಾರಣೆ ವೇಳೆ ಸೋನು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಮಗು ಹೇಳುವುದು ಏನು?: ಆರಂಭದಲ್ಲಿ ಮಗು ರಕ್ಷಣಾ ಘಟಕದ ಅಧಿಕಾರಿಗಳ ಜತೆ ಬರದೆ ಕಣ್ಣೀರು ಹಾಕುತ್ತಿತ್ತು. ನನಗೆ ಸೋನು ಅಕ್ಕಾ ಬೇಕು ಎಂದು ಹಠ ಹಿಡಿದಿತ್ತು. ಅಂತಿಮವಾಗಿ ಸೋನು ಮಾತನಾಡಿದ ಬಳಿಕ ಕಾನೂನು ಪ್ರಕಾರ ಮಗುವನ್ನು ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಿ ಮಕ್ಕಳ ರಕ್ಷಣಾ ಸಮಿತಿ ಮುಂದೆ ಹಾಜರುಪಡಿಸಿ ಆರೈಕೆ ಮಾಡಲಾಗುತ್ತಿದೆ.
'ಸೋನು ಅಕ್ಕ, ಅಪ್ಪ -ಅಮ್ಮನ ಜತೆ ಮಾತನಾಡಿಯೇ ಕರೆದುಕೊಂಡು ಬಂದಿದ್ದಾರೆ. ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಶಾಲೆಗೂ ಕಳಿಸುತ್ತಾರೆ ಅಂತ ಮಗು ವಿಚಾರಣೆ ವೇಳೆ ಹೇಳಿಕೆ ನೀಡಿದೆ,' ಎಂದು ಮೂಲಗಳು ಹೇಳಿವೆ.
@ಆರ್ಥಿಕ ಲಾಭದ ಶಂಕೆ?@
"ಸರಕಾರದ ದತ್ತು ಪ್ರಕ್ರಿಯೆಗಳನ್ನು ಪೂರ್ಣ ಗೊಳಿಸದೆ ಮಗುವನ್ನು ಜತೆಯಲ್ಲಿಟ್ಟುಕೊಳ್ಳುವುದು ಕಾನೂನುಬಾಹಿರ ಕ್ರಮ. ಸೋನುಗೌಡ, ಮಗುವಿನ ಜತೆ ವಿಡಿಯೊಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಆರ್ಥಿಕ ಲಾಭ ಪಡೆಯಲು ಪ್ರಯತ್ನಿಸಿರುವ ಶಂಕೆಯಿದೆ. ಜತೆಗೆ, ಮಗುವಿನ ಶಿಕ್ಷಣ ಅರ್ಧಕ್ಕೇ ಮೊಟಕು ಗೊಳಿಸಿ ಕರೆತಂದಿರುವ ಸಂದೇಹವಿದೆ. ಮಗುವಿನ ಪೋಷಕರನ್ನು ಕರೆಸಿ ಈ ಕುರಿತು ವಿಚಾರಣೆ ನಡೆಸಲಾಗುವುದು,'' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
Comments
Post a Comment