•2ನೇ ಸೂಪ‌ರ್ ಓವರ್‌ನಲ್ಲಿ ಕ್ಲೀನ್‌ ಸ್ವೀಪ್‌ಗೈದ ರೋಹಿತ್ ಪಡೆ||ಅಫಘಾನಿಸ್ತಾನಕ್ಕೆ ಸೋಲು | ಭಾರತಕ್ಕೆ ಸೂಪರ್ ಗೆಲುವು||

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅಪರೂಪಕ್ಕೆ 2ನೇ ಬಾರಿ ಸೂಪರ್ ಸಾಕ್ಷಿಯಾದ ಓವರ್‌ಗೆ ಭಾರತ ಮತ್ತು ಅಫಘಾನಿಸ್ತಾನ ನಡುವಿನ ಪಂದ್ಯದಲ್ಲಿ ಕೊನೆಗೂ ಭಾರತ ವಿಜಯದ ನಗೆ ಚೆಲ್ಲಿತು. 2ನೇ ಸೂಪರ್ ಓವರ್‌ನಲ್ಲಿ ಭಾರತ ಒಡ್ಡಿದ 12 ರನ್ ಗಳಿಗೆ ಪ್ರತಿಯಾಗಿ ಆಫ್ಘನ್ ತಂಡವನ್ನು 1 ರನ್‌ 2 ವಿಕೆಟ್ ಕಬಳಿಸಿದ ಭಾರತ, 10 ರನ್ ಅಂತರದಲ್ಲಿ ಜಯ ಗಳಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್ ಮಾಡಿತು. ಇದಕ್ಕೂ ಮುನ್ನ ಸೂಪರ್ ಓವರ್ ನಲ್ಲಿ ಆಫ್ಘನ್ ಒಡ್ಡಿದ 17 ರನ್ ಗುರಿಗೆ ಪ್ರತಿಯಾಗಿ ಭಾರತ 1 ವಿಕೆಟ್‌ಗೆ 16 ರನ್ ಗಳಿಸಿದ ಕಾರಣ ಪಂದ್ಯ ಮತ್ತೆ ಟೈ ಆಯಿತು.

ಅಫಘಾನಿಸ್ತಾನ ವಿರುದ್ಧದ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಶೂನ್ಯ ಸಂಪಾದನೆಗೆ ಔಟಾಗಿದ್ದ ನಾಯಕ ರೋಹಿತ್ ಶರ್ಮ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ದಾಖಲೆಯ ಶತಕ ಗಳಿಸಿದರು. ರಿಂಕು ಸಿಂಗ್ 69 ರನ್ ಗಳಿಸಿ, ದಾಖಲೆಯ 190 రనా ಜತೆಯಾಟಕ್ಕೆ ಸಾಕ್ಷಿಯಾದರು.

ಜೂನ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮುನ್ನ ಭಾರತಕ್ಕೆ ಪಾಲಿಗಿದು ಕೊನೆಯ ಟಿ20 ಸರಣಿಯಾಗಿದ್ದ ಕಾರಣ ತಂಡದಲ್ಲಿ ಸ್ಥಾನ ಪಡೆಯಲು ಯುವ ಮತ್ತು ಅನುಭವಿಗಳಿಗೆ ಈ ಸರಣಿ ಮಹತ್ವದ್ದಾಗಿತ್ತು. 14 ತಿಂಗಳ ನಂತರ ಟಿ20 ಕ್ರಿಕೆಟ್‌ ಗೆ ಮರಳಿದ್ದ ರೋಹಿತ್ ಮತ್ತು ಕೊಹ್ಲಿ ಎಲ್ಲರ ಕೇಂದ್ರ ಬಿಂದುವಾಗಿದ್ದರು. ಕೊಹ್ಲಿ ಆಡಿದ 2 ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ ರೋಹಿತ್ ಮಾತ್ರ ಸ್ಫೋಟಕ ಶತಕದೊಂದಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.

ರೋಹಿತ್ (121* ರನ್, 69 ಎಸೆತ, 11 ಫೋರ್, 8 ಸಿಕ್ಸರ್) ಮತ್ತು ರಿಂಕು ಸಿಂಗ್ (69* ರನ್, 39 ಎಸೆತ, 2 ಫೋರ್, 6 ಸಿಕ್ಸರ್) ತಮ್ಮ ಮಿಂಚಿನ ಆಟದಿಂದ ತಂಡದ ಮೊತ್ತವನ್ನು 212ಕ್ಕೆ ವಿಸ್ತರಿಸಿದರು. ಇದಕ್ಕೆ ಪ್ರತಿಯಾಗಿ ಅಫಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಹೀಗಾಗಿ ಪಂದ್ಯ ಟೈ ಆಯಿತು. ನಂತರ ಫಲಿತಾಂಶ ನಿರ್ಣಯಕ್ಕೆ ಸೂಪರ್ ಓವರ್ ಮೊರೆ ಹೋಗಲಾಯಿತು.
#ಭಾರತದ ಪರ ಅತ್ಯಧಿಕ ಜತೆಯಾಟ:
ರೋಹಿತ್ ಮತ್ತು ರಿಂಕು ಸಿಂಗ್ ಮುರಿ ಯದ 5ನೇ ವಿಕೆಟ್‌ಗೆ 95 ಎಸೆತಗಳಲ್ಲಿ 190 ರನ್ ಗಳಿಸುವ ಮೂಲಕ ಭಾರತದ ಪರ ಯಾವುದೇ ವಿಕೆಟ್ ಅತ್ಯಧಿಕ ರನ್ ದಾಖಲಿಸಿದರು. 2022ರಲ್ಲಿ ಸ್ಯಾಟ್ಸನ್ ಮತ್ತು ದೀಪಕ್ ಹೂಡಾ ಭಾರತದ ಪರ 2ನೇ ವಿಕೆಟ್‌ಗೆ 176 ರನ್ ಗಳಿಸಿದ್ದು, ಇದುವರೆಗಿನ ದಾಖಲೆಯಾಗಿತ್ತು.

#ರೋಹಿತ್ ಸೆಂಚುರಿ ದಾಖಲೆ:
ಟಿ20 ಕ್ರಿಕೆಟ್ ಇತಿಹಾಸದಲ್ಲಿ 5 ಶತಕ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ರೋಹಿತ್ ಭಾಜನರಾದರು. ಬೆಂಗಳೂರಿನಲ್ಲಿ ಬುಧವಾರ ಅಜೇಯ 121 ರನ್ ಕಲೆಹಾಕಿ ರೋಹಿತ್ ಈ ಮೈಲುಗಲ್ಲು ಸ್ಥಾಪಿಸಿದರು.

#ಕೊನೆಯ ಓವರ್‌ನಲ್ಲಿ 36 ರನ್: 
22ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ, ರೋಹಿತ್ ಶರ್ಮ ಮತ್ತು ರಿಂಕು ಸಿಂಗ್ ಅವರ ಅಬ್ಬರದಿಂದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ 5 ಸಿಕ್ಸ‌ರ್ ಸೇರಿದಂತೆ 36 ರನ್ ಗಳಿಸಿ ಗಮನ ಸೆಳೆದರು.

#ಪವ‌ರ್ ಪ್ಲೇನಲ್ಲಿ ಪರದಾಡಿದ ಭಾರತ:
ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ರುವ ಭಾರತ, ಪವರ್ ಪ್ಲೇನಲ್ಲಿ ರನ್ ಗಳಿಸಲು ತಿಣುಕಾಡಿತು. ಪ್ರವಾಸಿ ತಂಡದ ಫರೀದ್ ಅಹ್ಮದ್ (10ಕ್ಕೆ 3) ಅವರ ದಾಳಿಗೆ ಟೀಮ್ ಇಂಡಿಯಾ ಆಟಗಾರರು ನಲುಗಿದರು.

#ಸಂಕ್ಷಿಪ್ತ ಸ್ಕೋ‌ರ್:
#ಭಾರತ: 20 ಓವರ್‌ಗಳಲ್ಲಿ 4 ವಿಕೆಟ್ ಗೆ 212(ರೋಹಿತ್ ಶರ್ಮ 212*, ರಿಂಕು69*; ಫರೀದ್ ಅಹ್ಮದ್ 20ಕ್ಕೆ3).

#ಅಫಘಾನಿಸ್ತಾನ: 20 ಓವರ್‌ಗಳಲ್ಲಿ 6 ವಿಕೆಟ್ ಗೆ 212 ( ಗುರ್ಬಾಜ್ 50, ಇಬ್ರಾಹಿಂ ಝಿದ್ರಾನ್ 50, ಗಲ್ಬದಿನ್ ನಯಿಬ್ 55*; ವಾಷಿಂಗ್ಟನ್ 18ಕ್ಕೆ3).

Comments