ರಾಮನ ದರ್ಶನಕ್ಕೆ ಮೊದಲ ದಿನ 5 ಲಕ್ಷ ಭಕ್ತರಿಂದ ದರ್ಶನ
(ಬೆಳಗ್ಗೆ 3ರಿಂದಲೇ ಬೀಡುಬಿಟ್ಟಿದ್ದ ಲಕ್ಷಾಂತರ ಜನ | ರಾಮನ ದರ್ಶನಕ್ಕೆ ಮುಗಿಬಿದ್ದ ಭಕ್ತರ ದಂಡು । ಸಿಎಂ ಯೋಗಿ ವೈಮಾನಿಕ ಸಮೀಕ್ಷೆ )
ಅಯೋಧ್ಯೆ: ರಾಮನೂರು ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಯಾದ ಬಳಿಕ 'ಬಾಲರಾಮ'ನ ದರ್ಶನಕ್ಕೆ ಭಕ್ತರ ದಂಡು ಸಾಗರೋಪಾದಿಯಲ್ಲಿ ಹರಿದುಬರುತ್ತಿದೆ. ರಾಮಲಲ್ಲಾನ ದರ್ಶನ ಪಡೆಯಲು ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಸಾವಿರಾರು ಭಕ್ತರು ಮಂಗಳವಾರ ಬೆಳಗಿನ ಜಾವ 3 ಗಂಟೆಯಿಂದಲೇ ಮಂದಿರದ ಆವರಣದ ಮುಂದೆ ಜಮಾಯಿಸಿದ್ದರು. ಬೆಳಗ್ಗೆ 6 ಗಂಟೆಯ ಹೊತ್ತಿಗೆ ಬ್ಯಾರಿಕೇಡ್‌ಗಳನ್ನು ದಾಟಿ ಆವರಣದೊಳಗೆ ಏಕಕಾಲಕ್ಕೆ ಪ್ರವೇಶಿಸಿದ್ದರಿಂದ ನೂಕು ನುಗ್ಗಲು ಉಂಟಾಯಿತು. ತಳ್ಳಾಟದಲ್ಲಿ ಕೆಲವರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವುದು ವರದಿಯಾಗಿದೆ.
#13 ಕಿ.ಮೀ. ದೂರದವರೆಗೂ ಕಂಡು ಬಂದ ಸರತಿಸಾಲು.
#ಅಯೋಧ್ಯೆಗೆ ಎಲ್ಲ ವಾಹನಗಳ ಪ್ರವೇಶಕ್ಕೆ ತಾತ್ಕಾಲಿಕ ಬ್ರೇಕ್.
#ಬಾಲರಾಮ ವಿಗ್ರಹಕ್ಕೆ 'ಬಾಲಕ್ ರಾಮ್' ಎಂದು ಹೆಸರಿಟ್ಟ ಅರ್ಚಕ ಅರುಣ್ ದೀಕ್ಷಿತ್.
# ಗಣರಾಜ್ಯೋತ್ಸವ ಪರೇಡ್ ನಲ್ಲಿ ಉತ್ತರ ಪ್ರದೇಶದಿಂದ 'ರಾಮಲಲ್ಲಾ' ಟ್ಯಾಬ್ಲೊ ಭಾಗವಹಿಸಲಿದೆ.
ಜನದಟ್ಟಣೆ ನಿಭಾಯಿಸುವಲ್ಲಿ ಅಯೋಧ್ಯೆ ಜಿಲ್ಲಾಡಳಿತ ವಿಫಲಗೊಂಡಿದೆ ಎಂದು ಅಸಮಾಧಾನ ಹೊರಹಾಕಿರುವ ಸಿಎಂ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆ ಯಲ್ಲಿ ವೈಮಾನಿಕ ಸಮೀಕ್ಷೆಕೈಗೊಂಡು, ಪರಿಸ್ಥಿತಿ ತಿಳಿಗೊಳಿಸು ವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಜನರ ಪ್ರವಾಹ ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದು, ಮಧ್ಯಾಹ್ನದ ಹೊತ್ತಿಗೆ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಇಲಾಖೆ ತಿಳಿಸಿದೆ. ಬೆಳಗ್ಗೆ 6 ಗಂಟೆಯಿಂದಲೇ ರಾಮಲಲ್ಲಾನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. 8 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೂ ಬೆಳಗ್ಗೆ 10 ಗಂಟೆಯ ಸುಮಾರಿಗೆ ಪರಿಸ್ಥಿತಿ ಮಿತಿಮೀರಿತ್ತು. ಪೊಲೀಸರು ಮನವಿಗೂ ಜನರು ಸ್ಪಂದಿಸಲಿಲ್ಲ. ಆಗ ಅಯೋಧ್ಯೆ ಜಿಲ್ಲಾಡಳಿತವು ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತಂದಿತು. ಒಂದು ಹಂತದಲ್ಲಿ ತಾತ್ಕಾಲಿಕ ಅವಧಿಗೆ ದರ್ಶನವನ್ನು ಬಂದ್ ಮಾಡಲಾಗಿತ್ತು. ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಉತ್ತರ ಪ್ರದೇಶ ಗೃಹ ಸಚಿವಾಲಯದ ಪ್ರಧಾನ ಕಾಯದರ್ಶಿ ಸಂಜಯ್ ಪ್ರಸಾದ್, ವಿಶೇಷ ಡಿಜಿ (ಕಾನೂನು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಪರಿಸ್ಥಿತಿ ಪರಿಶೀಲಿಸಿದರು.
ಬರದಂತೆ ಜನರಲ್ಲಿ ಮನವಿ: ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಕೆಲವು ಸಂಚಾರ ಮಾರ್ಗಗಳಲ್ಲಿ ಬದಲಾವಣೆ ತಂದಿದ್ದಾರೆ. ''ಮೊದಲ ದಿನವೇ ರಾಮಲಲ್ಲಾನ ದರ್ಶನ ಪಡೆಯಬೇಕು ಎಂಬ ಆತುರಬೇಡ. ಸಾಧ್ಯವಾದಷ್ಟು ದಿನ ಅಯೋಧ್ಯೆ ಭೇಟಿ ಮುಂದೂಡಿ,'' ಎಂದು ಉ.ಪ್ರದೇಶ ಪೊಲೀಸ್ ಇಲಾಖೆ 'ಎಕ್ಸ್'ನಲ್ಲಿ ಮನವಿ ಮಾಡಿಕೊಂಡಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನಕ್ಕೆ ಮುಗಿಬಿದ್ದ ಭಕ್ತ ಸಮೂಹ. ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ.
('ನನ್ನ ಹೃದಯದಲ್ಲಿ ಅಯೋಧ್ಯೆ ಬೇರೂರಿದೆ')
ಹೊಸದಿಲ್ಲಿ: "ಯಾತ್ರಿಕನಾಗಿ ಅಯೋಧ್ಯೆಗೆ ಪ್ರಯಾಣ ಮಾಡಿದ್ದೆ. ರಾಮಲಲ್ಲಾಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ಮರಳಿ ಬರುವಾಗ ನನ್ನಿಂದ ಬೇರ್ಪಡಿಸಲಾಗದ ಅಯೋಧ್ಯೆಯನ್ನು ನನ್ನ ಹೃದಯದಲ್ಲಿ ತುಂಬಿಕೊಂಡು ಹಿಂದಿರುಗಿದ್ದೇನೆ,'' ಎಂದು ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.
"ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ 11 ದಿನಗಳ ಅನುಷ್ಠಾನ ಕೈಗೊಂಡಿದ್ದ ಮೋದಿ ಅವರ ಕಾರ್ಯವನ್ನು ಶ್ಲಾಘಿಸಿದ್ದ ದೌಪದಿ ಮುರ್ಮು ಅವರು, ಪ್ರಧಾನಿಯಾಗಿ ನೀವು ಇಡುವ ಪ್ರತಿ ಹೆಜ್ಜೆಯೂ ನವನಾಗರಿಕತೆಯ ಹಾದಿಯ ಪಯಣವಾಗಿದೆ,'' ಎಂದು ಹೇಳಿದ್ದರು. ಮಂಗಳವಾರ ರಾಷ್ಟ್ರಪತಿ ಮುರ್ಮು ಅವರ ಪತ್ರಕ್ಕೆ ಪ್ರತಿಯಾಗಿ ಪತ್ರ ಬರೆದಿರುವ ಮೋದಿ ಅವರು, "ರಾಮಲಲ್ಲಾ ಮರಳಿ ಮನೆಗೆ ಬರುತ್ತಾನೆ ಎಂಬ ನಂಬಿಕೆಯಲ್ಲಿ ನಮ್ಮ ದೇಶದ ಕೊಟ್ಯಂತರ ಜನ ನೂರಾರು ವರ್ಷ ಉಪವಾಸ ಮಾಡಿದ್ದಾರೆ. ಮರಳಿ ಬಂದ ಭಗವಾನ್ ರಾಮನ ಸೇವೆಗೆ ನಮ್ಮನ್ನು ಅರ್ಪಿಸಿಕೊಂಡ ಕ್ಷಣವದು,'' ಎಂದು ಬರೆದಿದ್ದಾರೆ.
"(ವಜ್ರದ ಕಿರೀಟ ಸಮರ್ಪಣೆ)"
# ರಾಮಲಲ್ಲಾನಿಗೆ 6 ಕೆ.ಜಿ ತೂಕದ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಸೂರತ್ ವಜ್ರದ ವ್ಯಾಪಾರಿ ಮುಕೇಶ್ ಪಟೇಲ್.
# ಮಂದಿರಕ್ಕೆ ಉದ್ಯಮಿ ಮುಕೇಶ್ ಅಂಬಾನಿಯಿಂದ 2.5 ಕೋಟಿ ರೂ. ದೇಣಿಗೆ ನೀಡಿಕೆ.
"250 ವರ್ಷದ ಹಳೆಯ ಕಲ್ಲು":
ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಕೃಷ್ಣ ಶಿಲೆಯ ಬಾಲರಾಮ ವಿಗ್ರಹಕ್ಕೆ ಶಿಲ್ಪಿ ಕನ್ನಡಿಗ ಅರುಣ್ ಯೋಗಿರಾಜ್ ಬಳಸಿರುವ ಕಲ್ಲು 250 ವರ್ಷದಷ್ಟು ಹಳೆಯದು ಎಂದು 'ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್'ನ ಅಧಿಕಾರಿ ಎಚ್. ಎಸ್. ವೆಂಕಟೇಶ್ ಹೇಳಿದ್ದಾರೆ. “ಈ ಶಿಲೆಯು ಉಷ್ಣವಲಯದಲ್ಲೂ ಸಾವಿರಾರು ವರ್ಷ ಬಾಳಿಕೆ ಬರುವಷ್ಟು ಗಟ್ಟಿ, ನಿರ್ವಹಣೆಯೂ ಸುಲಭ,'' ಎಂದು ಹೇಳಿದ್ದಾರೆ.
Comments
Post a Comment