ಮುಂಜಾನೆವರೆಗೆ ಪಾರ್ಟಿ: ದರ್ಶನ್, ಡಾಲಿ ವಿಚಾರಣೆ8 ಮಂದಿ ಪೊಲೀಸ್‌ ಠಾಣೆಗೆ

'ಕಾಟೇರ' ಸಿನಿಮಾದ ಯಶಸ್ಸಿನ ಸಂಭ್ರಮಕ್ಕಾಗಿ ನಗರದ ಪಬ್‌ವೊಂದರಲ್ಲಿ ನಿಯಮ ಉಲ್ಲಂಘಿಸಿ ಮುಂಜಾನೆವರೆಗೆ ಪಾರ್ಟಿ ಆಯೋಜಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಚಿತ್ರರಂಗದ ಎಂಟು ಮಂದಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ವಿಚಾರಣೆಗೆ ಹಾಜರಾದರು.

ನಟರಾದ ದರ್ಶನ್, ನಿನಾಸಂ ಸತೀಶ್, ಡಾಲಿ ಧನಂಜಯ್, ಅಭಿಷೇಕ್ ಅಂಬರೀಷ್, ಚಿಕ್ಕಣ್ಣ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರು ಖುದ್ದು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದರು.

ನಿಯಮ ಉಲ್ಲಂಘಿಸಿ ಜ.3ರಂದು ಪಾರ್ಟಿ ನಡೆಸಿದ್ದ ಆರೋಪದ ಹಿನ್ನೆಲೆಯಲ್ಲಿ ಜ.7ರಂದು ಪೊಲೀಸರು ನೋಟಿಸ್ ಜಾರಿ ಮಾಡಿ, ಜ.8ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ದರ್ಶನ್ ಹಾಗೂ ತರುಣ್ ಸುಧೀರ್ ಅವರು ಸಿನಿಮಾದ ಪ್ರಚಾರಕ್ಕೆ ದುಬೈಗೆ ತೆರಳಿದ್ದರಿಂದ ವಿಚಾರಣೆಗೆ ಬಂದಿರಲಿಲ್ಲ. ಶುಕ್ರವಾರ ಎಲ್ಲರೂ ಒಮ್ಮೆಲೇ ವಿಚಾರಣೆಗೆ ಬಂದು ಹೇಳಿಕೆ ನೀಡಿದ್ದಾರೆ. ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡರು. ರಾತ್ರಿ 1 ಗಂಟೆಗೆ ಪಬ್ ಅನ್ನು ಮುಚ್ಚಬೇಕೆಂಬ ನಿಯಮವಿದೆ. ಆದಾಗ್ಯೂ, ಮುಂಜಾನೆವರೆಗೆ ಪಾರ್ಟಿ ಮಾಡಿದ್ದು ಏಕೆ ಎಂದು ಪೊಲೀಸರು ಪ್ರಶ್ನಿಸಿ, ಹೇಳಿಕೆ ದಾಖಲಿಸಿಕೊಂಡರು ಎಂದು ತನಿಖಾ ಮೂಲಗಳು ತಿಳಿಸಿವೆ.
ಪೊಲೀಸ್ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಕ್‌ ಲೈನ್ ವೆಂಕಟೇಶ್, "ಕಾಟೇರ ಸಿನಿಮಾದ ಯಶಸ್ಸಿನ ಹಿನ್ನೆಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಪಾರ್ಟಿ ಆಯೋಜಿಸಿರಲಿಲ್ಲ. ಸಿನಿಮಾ ಯಶಸ್ವಿ ಯಾಗಿರುವುದನ್ನು ಸಹಿಸದ ಕೆಲವರು ಅಪಪ್ರಚಾರ ಹಾಗೂ ನಟ ದರ್ಶನ್ ಅವರ ಗೌರವಕ್ಕೆ ಧಕ್ಕೆ ತರಲು ಸಂಚು ರೂಪಿಸಿದ್ದಾರೆ,'' ಎಂದು ಆರೋಪಿಸಿದರು

Comments