ಚೆನ್ನೈ ಪುಸ್ತಕ ಮೇಳದಲ್ಲಿ 'ಶಿಲಪ್ಪದಿಕಾರಂ' ನೆನಪು, ಕರುನಾಡ ಕಂಪು||ಕನ್ನಡ-ತಮಿಳು ಬೆಸೆಯಿರೋ ನೀವೆಲ್ಲರೂ...||

ಚೆನ್ನೈನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪುಸ್ತಕ ಮೇಳ ಸಂವಾದದಲ್ಲಿ ಗಣ್ಯರು.

ಕನ್ನಡ ತಮಿಳು ಮಧ್ಯೆ ಹಿಂದಿನಿಂದಲೇ ಕೊಡುಕೊಳ್ಳುವಿಕೆ ನಡೆಯುತ್ತ ಬಂದಿದೆ. 'ಶಿಲಪ್ಪದಿಕಾರಂ'ನಂಥ ಕೃತಿ ಹಲವು ಜನರಿಂದ ವಿವಿಧ ಸಂದರ್ಭಗಳಲ್ಲಿ ಕನ್ನಡಕ್ಕೆ ಬಂದಿರು ವುದೇ ಇದಕ್ಕೆ ಸಾಕ್ಷಿ ಎಂದು ಭಾಷಾ ವಿದ್ವಾಂಸ ಡಾ.ವಿ.ಎಸ್. ಶ್ರೀಧರ ಅಭಿಪ್ರಾಯಪಟ್ಟರು. ಚೆನ್ನೈನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಭಾಷಾಂತರ ಗೋಷ್ಠಿಯಲ್ಲಿ ಮಾತಾಡಿದ ಅವರು, ಕನ್ನಡ- ತಮಿಳು ಬಾಂಧವ್ಯವನ್ನು ತೆರೆದಿಟ್ಟರು. “ಭಾಷೆಗಳ ಮಧ್ಯೆ ನೇರ ಕೊಡುಕೊಳ್ಳುವಿಕೆ ನಡೆದರೆ ಅಧಿಕೃತತೆ ಹೆಚ್ಚು. ಈ ನಿಟ್ಟಿನಲ್ಲಿ ಕನ್ನಡ- ತಮಿಳು ಎರಡೂ ಭಾಷೆಗಳನ್ನು ಬಲ್ಲವರ ಹಾಗೂ ಅನುವಾದ ಮಾಡುವವರ
ಕೊರತೆ ಇದೆ,'' ಎಂದರು.

#ಅನುವಾದದ ಯೋಜನೆ: 
ಚೆನ್ನೈಯಲ್ಲಿ ಜ.16ರಿಂದ ನಡೆಯುತ್ತಿರುವ ಚೆನ್ನೈ ಅಂತಾರಾಷ್ಟ್ರೀಯ ಪುಸ್ತಕ ಮೇಳದ ಉದ್ದೇಶವೇ ಅನುವಾದಕ್ಕೆ ಅನುವು ಮಾಡಿಕೊಡುವುದು. ಈ ಮೂಲಕ ತಮಿಳು ಭಾಷೆ, ಸಂಸ್ಕೃತಿಯ ಕಂಪನ್ನು ಜಗದಗಲ ಹಬ್ಬಿಸುವ ನಿರೀಕ್ಷೆ ಆಯೋಜಕರದ್ದು, ತಮಿಳುನಾಡು ಸರಕಾರದ ಅಧೀನದಲ್ಲಿರುವ ತಮಿಳುನಾಡು ಪಠ್ಯಪುಸ್ತಕ ಮತ್ತು ಶಿಕ್ಷಣ ಸೇವಾ ನಿಗಮ (ಐಎನ್‌ಟಿಬಿ ಮತ್ತು ಇಎಸ್‌ಸಿ) ಹಮ್ಮಿಕೊಂಡಿರುವ ಪುಸ್ತಕ ಮೇಳವಿದು. ಇದರಲ್ಲಿ ತಮಿಳಿನ ಅಭಿಜಾತ (ಕ್ಲಾಸಿಕ್) ಕೃತಿಗಳಿಂದ ಇಂದಿನವರೆಗಿನ ವಿವಿಧ ಕೃತಿಗಳ ಕಾಪಿರೈಟ್‌ಗಳನ್ನು ಪಡೆದುಕೊಳ್ಳ ಬಹುದು. ಮತ್ತು ಹೀಗೆ ಐಎನ್‌ಟಿಬಿ ಮೂಲಕ ಕಾಪಿರೈಟ್ ಪಡೆದ ಕೃತಿಯ ಅನುವಾದದಿಂದ ತೊಡಗಿ ಮುದ್ರಣದವರೆಗಿನ ವೆಚ್ಚವನ್ನೂ ಐಎನ್‌ಟಿಬಿ ಕೊಡುತ್ತದೆ.
#46 ದೇಶಗಳ ಪಾಲ್ಗೊಳ್ಳುವಿಕೆ:
 ಆರಂಭದಲ್ಲಿ 2021-22ರಲ್ಲಿ ಇಂಗ್ಲಿಷ್ ಜೊತೆಗಿನ ಕೊಡುಕೊಳ್ಳುವಿಕೆಯೊಂದಿಗೆ ಆರಂಭವಾದ ಈ ಅನುವಾದ ಯೋಜನೆ 2023ರಲ್ಲಿ ದಕ್ಷಿಣ. ಭಾರತದ ಕನ್ನಡ, ಮಲಯಾಲಂ, ತೆಲುಗು ಭಾಷೆಗಳಿಗೂ ವಿಸ್ತರಿಸಿತು. ಈ ಬಾರಿ ಇದರಲ್ಲಿ ಹಲವು ದೇಶಗಳನ್ನೂ ಸೇರಿಸಿಕೊಳ್ಳಲಾಗಿದೆ. ಕೆನಡಾ, ಬಲ್ಲೇರಿಯಾ, ಜರ್ಮನಿ, ನಾರ್ವೆ, ಸ್ಪೇನ್, ಟರ್ಕಿ, ಸ್ವೀಡನ್, ಐರ್ಲೆಂಡ್ ಮೊದಲಾದ ವಿಶ್ವದ 46 ದೇಶಗಳು ತಮ್ಮ ಪುಸ್ತಕ ಮಳಿಗೆಗಳೊಂದಿಗೆ ಪಾಲ್ಗೊಂಡಿದ್ದು, ಪುಸ್ತಕಗಳ ಅನುವಾದಕ್ಕೆ ಒಪ್ಪಂದ ಮಾಡಿಕೊಳ್ಳಲಿವೆ.
 ಇದಕ್ಕೆ ಪೂರಕವಾಗಿ ಪುಸ್ತಕ ಮೇಳದಲ್ಲಿ ಒಂದೆಡೆ ಪ್ರಕಾಶಕರು, ಬರಹಗಾರರ ಮಾತು ಕತೆ ನಡೆಯುತ್ತಿದ್ದರೆ ಇನ್ನೊಂದೆಡೆ ಪ್ರಕಾಶಕರ, ಅನುವಾದಕರ ಗೋಷ್ಠಿಗಳೂ ನಡೆದವು.

#ಮಲೇಷ್ಯಾ ಅತಿಥಿ ರಾಷ್ಟ್ರ:
 ಈ ವರ್ಷ ಮಲೇಷ್ಯಾ ಈ ಪುಸ್ತಕ ಮೇಳದ ಅತಿಥಿ ರಾಷ್ಟ್ರದ ಗೌರವ ಪಡೆದಿದ್ದು, ಮೂರು ದಿನಗಳ ಕಾಲದ ಕಾರ್ಯಕ್ರಮಗಳಲ್ಲಿ ಈ ರಾಷ್ಟ್ರದ ವಿವಿಧ ಸಾಂಸ್ಕೃತಿಕ ನೃತ್ಯ, ಆಚರಣೆಗಳನ್ನೂ ಪ್ರದರ್ಶಿಸಲಾಗುತ್ತಿದೆ.

Comments