ಬಿಜೆಪಿಗೆ ಮರಳಿದ ಜಗದೀಶ್ ಶೆಟ್ಟರ್ :-ಕಾಂಗ್ರೆಸ್‌ಗೆ ಶಾಕ್
"ಮಾತೃಪಕ್ಷ ಬಿಜೆಪಿಗೆ ಮರಳಿದ ಜಗದೀಶ್ ಶೆಟ್ಟರ್ ಅವರನ್ನು ದಿಲ್ಲಿಯಲ್ಲಿ ಗುರುವಾರ ಪಕ್ಷಾಧ್ಯಕ್ಷ ಜೆ.ಪಿ. ನಡ್ಡಾ ಬರಮಾಡಿಕೊಂಡರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇದ್ದರು."
ಬಿಜೆಪಿಯ 'ರಿವರ್ಸ್ ಆಪರೇಷನ್' ಯಶಸ್ವಿಯಾಗು ವುದರೊಂದಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ 'ಘರ್‌ವಾಪ್ಪಿ'ಯಾಗಿದ್ದಾರೆ. ಜತೆಗೆ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಶೆಟ್ಟರ್ ಕಣಕ್ಕಿಳಿಯುವ ಸಾಧ್ಯತೆಯಿದೆ.
ಗುರುವಾರ ಬೆಳಗ್ಗೆ ನಡೆದ ಬಿರುಸಿನ ರಾಜಕೀಯ ಚಟುವಟಿಕೆಯಲ್ಲಿ ದಿಲ್ಲಿಯ ಬಿಜೆಪಿ ಕಚೇರಿಯಲ್ಲಿ ಜಗದೀಶ ಶೆಟ್ಟರ್ ಅವರನ್ನು ಮರಳಿ ಮನೆ ತುಂಬಿಸಿಕೊಳ್ಳುವ ಶಿಷ್ಟಾಚಾರ ಪೂರೈಸಲಾಯಿತು. ಇದರೊಂದಿಗೆ ಶೆಟ್ಟರ್ ಅವರ ಹತ್ತು ತಿಂಗಳ ಅವಧಿಯ 'ಕಾಂಗ್ರೆಸ್ ಸಂಸಾರ' ಮುರಿದು ಬಿದ್ದಂತಾಗಿದೆ.
ಈ ಮೂಲಕ ಆಡಳಿತಾರೂಢ ಕಾಂಗ್ರೆಸ್‌ಗೆ ಬಿಗ್ ಶಾಕ್ ನೀಡಿದಂತಾಗಿದೆ. ಯಾಕೆಂದರೆ, ಶೆಟ್ಟರ್ ಅವರಂಥ ಹಿರಿಯರನ್ನು ತೆಕ್ಕೆಗೆ ಎಳೆದುಕೊಂಡ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಇದರ ಲಾಭ ಪಡೆಯಲು ಅಬ್ಬರಿಸಿತ್ತು. ಶೆಟ್ಟರ್ ಅಲ್ಲದೆ ಲಕ್ಷ್ಮಣ ಸವದಿ ಅವರನ್ನೂ ಸೇರಿಸಿಕೊಂಡಿದ್ದ ಕಾಂಗ್ರೆಸ್, ಲಿಂಗಾಯತ ನಾಯಕರಿಗೆ ಬಿಜೆಪಿಯಲ್ಲಿ ದೊಡ್ಡ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿತ್ತು. ಹಾಗಾಗಿ ಶೆಟ್ಟರ್ ಬಿಜೆಪಿಗೆ ಹಿಂದಿರುಗಿ ದ್ದರಿಂದ ಕಾಂಗ್ರೆಸ್‌ಗೂ ಮುಜುಗರವಾದಂತಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಬಿಜೆಪಿ ತೊರೆದ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದರು. ಬಳಿಕ ಸ್ವಕ್ಷೇತ್ರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಿಂದ ಕಾಂಗ್ರೆಸ್ ಚಿಹ್ನೆಯಡಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ, ಶೆಟ್ಟರ್ ಹಿರಿತನ ಪರಿಗಣಿಸಿದ ಕಾಂಗ್ರೆಸ್ ಪಕ್ಷ ಪರಿಷತ್ ಸದಸ್ಯತ್ವ ನೀಡಿತ್ತು.
ಇಷ್ಟಾದರೂ ಶೆಟ್ಟರ್ ಬಿಜೆಪಿಗೆ ವಾಪಸಾಗಿರುವುದಕ್ಕೆ ಕಾಂಗ್ರೆಸ್ ಸಂಸ್ಕೃತಿಯಲ್ಲಿ ಒಂದಾಗಿ ಬೆರೆಯುವುದು ಅವರಿಗೆ ತ್ರಾಸದಾಯಕ ಆಗಿರುವುದು ಒಂದು ಕಾರಣ. ಬಿಜೆಪಿಗೆ ಮರಳುವಂತೆ ಒತ್ತಡವಿದ್ದದ್ದು ಮತ್ತೊಂದು ಕಾರಣ. ಮುಖ್ಯವಾಗಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ. ವೈ. ವಿಜಯೇಂದ್ರ ಅಧ್ಯಕ್ಷರಾದ ನಂತರ ಶೆಟ್ಟರ್ ಅವರನ್ನು ಸಂಪರ್ಕಿಸಿ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಲಾಗಿತ್ತು. ಬಿ.ಎಸ್.ಯಡಿಯೂರಪ್ಪ ಅವರೂ ಪಕ್ಷದ ಕೇಂದ್ರ ನಾಯಕರಿಗೆ ಈ ಬಗ್ಗೆ ಮನದಟ್ಟು ಮಾಡಿಕೊಟ್ಟಿದ್ದರು. ಇದೆಲ್ಲದರ ಫಲಶ್ರುತಿಯಾಗಿ ಶೆಟ್ಟರ್ ಪುನಃ ಬಿಜೆಪಿ ಧ್ವಜ ಹಿಡಿದಿದ್ದಾರೆ.
ಶೆಟ್ಟರ್ ಪಕ್ಷ ಸೇರ್ಪಡೆ ಹಿನ್ನೆಲೆಯಲ್ಲಿ ಬಿಎಸ್‌ವೈ ಎರಡು ದಿನದ ಹಿಂದೆಯೇ ದಿಲ್ಲಿ ತಲುಪಿಕೊಂಡಿದ್ದರು. " ವಿಜಯೇಂದ್ರ ಅವರು ಬುಧವಾರ ದಿಲ್ಲಿಗೆ ಪ್ರಯಾಣ * ಬೆಳೆಸಿದ್ದರು. ಈ ಮಧ್ಯೆ ಶೆಟ್ಟರ್ ಕೂಡ ದಿಲ್ಲಿಯಲ್ಲಿ ವಾಸ್ತವ್ಯ ಹೂಡಿಯಾಗಿತ್ತು. ಗುರುವಾರ ಬೆಳಗ್ಗೆ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಸಮ್ಮುಖ ಶೆಟ್ಟರ್ ಬಿಜೆಪಿ ಸೇರಿದರು. ಈ ಸಂದರ್ಭದಲ್ಲಿ ಬಿಎಸ್‌ವೈ, ವಿಜಯೇಂದ್ರ ಜತೆಗಿದ್ದರು. ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ಶೆಟ್ಟರ್ ಕೃತಜ್ಞತೆ ಹೇಳಿದರು.
©ದಿನದ ಬೆಳವಣಿಗೆ©
#ಬಿಜೆಪಿ ಸೇರ್ಪಡೆಗೂ ಮೊದಲು ಕೆಪಿಸಿಸಿ ಸದಸ್ಯತ್ವ ಹಾಗೂ ವಿಧಾನ ಪರಿಷತ್ ಸದಸ್ಯತ್ವಕ್ಕೆ ಇ-ಮೇಲ್ ಮೂಲಕ ರಾಜೀನಾಮೆ ಪತ್ರ ಸಲ್ಲಿಸಿದ ಶೆಟ್ಟರ್
# ಪಕ್ಷಸೇರ್ಪಡೆಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶೆಟ್ಟರ್ ಭೇಟಿಯಾದರು. ಯಡಿಯೂರಪ್ಪ ಮತ್ತು ವಿಜಯೇಂದ್ರ ಜತೆಗಿದ್ದರು
#ಅಮಿತ್ ಶಾ ಅವರು ಗ್ರೀನ್ ಸಿಗ್ನಲ್ ನೀಡಿದ ಬಳಿಕವೇ ಶೆಟ್ಟರ್ 'ಘರ್ ವಾಪ್ಪಿ'ಗೆ ವ್ಯವಸ್ಥೆ ಮಾಡಿಕೊಳ್ಳಲಾಯಿತು
©ಲೋಕಸಭೆ ಟಿಕೆಟ್ ಪಕ್ಕಾ?©
ಶೆಟ್ಟರ್ ಅವರನ್ನು ಲೋಕಸಭೆ ಅಖಾಡಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಈಗಾಗಲೇ ನಿರ್ಧರಿಸಿದೆ. ಮೂಲಗಳ ಪ್ರಕಾರ, ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿ ಸುವಂತೆ ಈಗಾಗಲೇ ಸೂಚನೆಯಿದೆ. ಇದರ ಹೊರತಾಗಿ ಕೇಂದ್ರ ಸಚಿವ ಪ್ರಲಾದ ಜೋಶಿ ಸಂಸದರಾಗಿರುವ ಧಾರವಾಡ ಕ್ಷೇತ್ರವನ್ನೇ ಶೆಟ್ಟರ್ ಕೇಳುತ್ತಾರಾ? ಎಂಬ ಕುತೂಹಲವೂ ಇದೆ.
©ಸೀಕ್ರೆಟ್ ಅಪರೇಷನ್©
ಶೆಟ್ಟರ್ ಬಿಜೆಪಿಗೆ ಮರಳಿದ್ದರಲ್ಲಿ ಪಕ್ಷದ ವರಿಷ್ಠ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಮಹತ್ವದ ಪಾತ್ರವಿದೆ. ಶೆಟ್ಟರ್ ವಾಪಸಾದರೆ ಲೋಕಸಭೆ ಚುನಾವಣೆಯಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಕಾರ್ಯಕರ್ತರ ವಲಯದಲ್ಲಿತ್ತು. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿಎಸ್‌ವೈ ಕೈ ಮೇಲಾಗುತ್ತಿದ್ದಂತೆ ಶೆಟ್ಟರ್ ಅವರನ್ನು ವಾಪಸ್ ಕರೆತರುವ - ಕಾರ್ಯಾಚರಣೆ ಪ್ರಾರಂಭವಾಯಿತು. ಇದನ್ನು ರಹಸ್ಯವಾಗಿಟ್ಟು ಎಚ್ಚರಿಕೆಯಿಂದಲೇ ಯಶಸ್ವಿಗೊಳಿಸಲಾಯಿತು ಎನ್ನಲಾಗುತ್ತಿದೆ.
"ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮೆಚ್ಚಿ ಬಿಜೆಪಿಗೆ ಮರಳಿದ್ದೇನೆ. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ಅವರ ನಾಯಕತ್ವದಲ್ಲಿ ದೇಶಕ್ಕೆ ಹೆಚ್ಚಿನ ಶಕ್ತಿ ಬರಬೇಕು ಎನ್ನುವುದು ನನ್ನ ಅಪೇಕ್ಷೆ."
-ಜಗದೀಶ ಶೆಟ್ಟರ್ ಮಾಜಿ ಸಿಎಂ
©ಘರ್ ವಾಪಿ ಏಕೆ?©
# ಮೋದಿಯನ್ನು ಮತ್ತೆ ಪಿಎಂ ಮಾಡುವ ಅಪೇಕ್ಷೆ
# ಕೇಸರಿ ಕಟ್ಟಾಳುವಿಗೆ ಒಗ್ಗದ ಕಾಂಗ್ರೆಸ್ ಸಂಸ್ಕೃತಿ
#ಬಿಎಸ್‌ವೈ, ಬಿವೈವಿ ಸೇರಿ ನಾಯಕರ ಆಶಯ
#ಸಿದ್ದರಾಮಯ್ಯ ಸಂಪುಟಕ್ಕೆ ಸೇರಿಸಿಕೊಳ್ಳದೇ ಇರುವುದು
#ಬೆಳಗಾವಿಯಿಂದ ಲೋಕಸಭೆಗೆ ಸ್ಪರ್ಧಿಸಲು ಬಯಕೆ
Comments
Post a Comment