ರಾಮ-ಧರ್ಮಜ್ಞ (ಲೇಖಕಿ: ಸಂಸ್ಕೃತಿ ಚಿಂತಕಿ"ನಿರ್ಮಲಾ ಶರ್ಮ")

("ನಿರ್ಮಲಾ ಶರ್ಮ")
ರಾಮೋ ವಿಗ್ರಹವಾನ್ ಧರ್ಮಃ' ಎಂಬುದೊಂದು ರಾಮಾಯಣದ ಪ್ರಸಿದ್ದ ವಾಕ್ಯ. ಧರ್ಮವೇ ಮೂರ್ತಿವೆತ್ತಂತಿದ್ದ ರಾಮ. ಇದಕ್ಕೆ ಅನೇಕ ನಿದರ್ಶನಗಳಿವೆ. ಶಿವಧನುರ್ಭಂಗ ಮಾಡಿದಾಗ, ಸೀತೆ ರಾಮನಿಗೆ ಮಾಲೆ ಹಾಕಲು ಬಂದಳು. ರಾಮ ತಡೆದ. ಗುರುಗಳ ಅಪ್ಪಣೆಯಂತೆ ಬಿಲ್ಲನ್ನು ನೋಡಿದೆ, ಮುಟ್ಟಿದೆ. ಅದು ಮುರಿಯಿತು. ಆದರೆ, "ಸೀತೆಯನ್ನು ವಿವಾಹವಾಗಲು ತಂದೆ ಒಪ್ಪಬೇಕು,'' ಎಂದ. ಸೀತೆಯ ಮೇಲೆ ಅವನ ಪ್ರೀತಿ ಹೆಚ್ಚಾಗಲು ಕಾರಣ, ಅವಳು ತಂದೆ ಮೆಚ್ಚಿದ ಸೊಸೆ ಎಂಬುದೇ.
           
 ದಶರಥ ರಾಮನನ್ನು ಕಾಡಿಗೆ ಹೋಗೆಂದು ಬಾಯಿಬಿಟ್ಟು ಹೇಳಲೇ ಇಲ್ಲ, ಆದರೆ, ಕೈಕೇಯಿಗೆ ವರವನ್ನು ಕೊಟ್ಟುಬಿಟ್ಟಿದ್ದ. ತಂದೆಯ ಮಾತನ್ನು ನಿಜ ಮಾಡಲೆಂದೇ ರಾಮ ಕಾಡಿಗೆ ಹೋದ. ಕೌಸಲೈ ಹೋಗಬೇಡವೆಂದು ಅವನನ್ನು ತಡೆದರೂ, ಮೊದಲು ಹೇಳಿದ್ದು ತಂದೆ, ಆದ್ದರಿಂದ ಅವನ ಮಾತನ್ನು ಕೇಳಬೇಕು ಎಂದು ತಾಯಿಯ ಬಾಯನ್ನು ಮುಚ್ಚಿಸಿದ. ಅದು ಧರ್ಮ.
ವಾಲಿವಧೆಯ ಪ್ರಸಂಗ. ಕಿಕ್ಕಿಂಧೆಯಲ್ಲಿ ವಾಲಿ ಒಬ್ಬನೇ ದುಷ್ಟ ಅವನೊಡನೆ ನೇರಯುದ್ಧ ಮಾಡಿದ್ದರೆ, ಕಿಂಧೆಯ ಪ್ರಜೆಗಳಿಗೆ ತೊಂದರೆಯಾಗುತ್ತಿತ್ತು, ಈಗ ಅಯೋಧ್ಯೆಗೆ ಭರತ ರಾಜ, ಕಿಕ್ಕಿಂಧೆಯೂ ಇಕ್ಷಾಕು ವಂಶದವರಿಗೆ ಸೇರಿದ್ದು, ತಾನು ಭರತನ ಪ್ರತಿನಿಧಿ. ದುಷ್ಟಶಿಕ್ಷಣ ತನ್ನ ಕರ್ತವ್ಯ ಎಂದು ಅವನನ್ನು ಬಾಣದಿಂದ ಹೊಡೆದ. ಅದು ಧರ್ಮಸೂಕ್ಷ್ಮ.

ಸುಗ್ರೀವನ ಪಟ್ಟಾಭಿಷೇಕಕ್ಕೆ ರಾಮ ಹೋಗಲಿಲ್ಲ. ವನವಾಸದಲ್ಲಿ ನಗರಪ್ರವೇಶ ಕೂಡದು
ಮೈಮರೆತಿದ್ದ ಸುಗ್ರೀವನನ್ನು ಎಚ್ಚರಿಸಲು ಲಕ್ಷ್ಮಣನನ್ನು ಕಳಿಸಿದ.

ರಾಮನ ಧರ್ಮವೇ ಶರಣಾಗತ ರಕ್ಷಣೆ. ಸುಗ್ರೀವ ಮುಂತಾದವರೆಲ್ಲ ವಿಭೀಷಣನನ್ನು ಸೇರಿಸಿಕೊಳ್ಳಬಾರದೆಂದರು. "ಮಿತ್ರಭಾವದಿಂದ ರಾವಣನೇ ಬಂದರೂ ಕೈಬಿಡಲಾರೆ'' ಎಂದ ರಾಮ.

ಸೀತಾ ಅಗ್ನಿಪ್ರವೇಶ ಪ್ರಸಂಗ. ಸೀತೆ ಪರಿಶುದ್ದಳೆಂದು ರಾಮನಿಗೆ ತಿಳಿಯದೇ? ಪರಪುರುಷನ ಆಶ್ರಯದಲ್ಲಿ ಇದ್ದವಳೆಂದು ಅಯೋಧ್ಯೆಯ ಜನ ಶಂಕಿಸಬಾರದೆಂದು
ಅವಳನ್ನು ಅಗ್ನಿಪರೀಕ್ಷೆಗೆ ಒಡ್ಡಿದ, ಧರ್ಮಜ್ಞ. ವನವಾಸ ಮುಗಿಸಿ, ಅಯೋಧ್ಯೆಯ ಸಮೀಪದಲ್ಲಿ ಭರದ್ವಾಜರನ್ನು ಕೇಳಿದ, "ಭರತ ಹೇಗಿದ್ದಾನೆ? ಭರತನಿಗೇನಾದರೂ ರಾಜ್ಯದ ಮೇಲೆ ಆಸೆ ಇದೆಯೇ?'', ಅವರು, "ಭರತನನ್ನು ಶಂಕಿಸಬೇಡ ರಾಮ. ಅವನು ನಿನಗೆ ಸರಿಯಾದ ಸೋದರ,'' ಎನ್ನುತ್ತಾರೆ. ಭರತನಿಗೆ ರಾಜ್ಯದಾಸೆ ಇದ್ದರೆ, ರಾಮ ಮತ್ತೆ ಕಾಡಿಗೆ ಮರಳುತ್ತಿದ್ದ. ಚಿತ್ರಕೂಟದಲ್ಲಿ ಭರತ ರಾಮನನ್ನು ಊರಿಗೆ ಮರಳುವಂತೆ ಪರಿಪರಿಯಾಗಿ ಬೇಡಿದ. ರಾಮ ಒಪ್ಪಲಿಲ್ಲ, ಅಣ್ಣ ತಮ್ಮಂದಿರಿಬ್ಬರೂ ಧರ್ಮಜ್ಞರೇ.

ಸೀತಾಪರಿತ್ಯಾಗದ ವಿಷಯ. ರಾಮ ಗೂಢಚಾರರಿಂದ ಸೀತೆಯನ್ನು ಜನ ಸಂದೇಹಿಸುತ್ತಿರುವರೆಂದು ಅರಿತ. ರಾಜನಿಗೆ ಸ್ವಂತ ಸುಖಕ್ಕಿಂತ ಪ್ರಜೆಗಳ ನಂಬಿಕೆಯೇ ಮುಖ್ಯ ಎಂದು ಅವಳನ್ನು ವಾಲ್ಮೀಕಿಗಳ ಆಶ್ರಮಕ್ಕೆ ಕಳಿಸಿದ. 'ಧರ್ಮಾತ್ಮಾ ಸತ್ಯಸಂಧಶ್ಚ ರಾಮೋ ದಾಶರಥಿಃ ಯದಿ,'' ಎಂದು ಅಣ್ಣನ ಮೇಲೆ ಆಣೆ ಇಟ್ಟು ಲಕ್ಷ್ಮಣ ಇಂದ್ರಜಿತನ ಮೇಲೆ ಬ್ರಹ್ಮಾಸ್ತ್ರ ಬಿಟ್ಟ. ಬಾಣ ತನ್ನ ಕೆಲಸ ಮಾಡಿತು. ರಾಮ ಧರ್ಮಜ್ಞ. (ಲೇಖಕಿ: ಸಂಸ್ಕೃತಿ ಚಿಂತಕಿ)

Comments