ಯುಪಿಎಸ್‌ಸಿ ಪರೀಕ್ಷೆಗೆ 14ರಂದು ಅಧಿಸೂಚನೆ ಮತ್ತು ಕನ್ನಡದಲ್ಲೇ CAPF ಪರೀಕ್ಷೆ

ಮೊದಲ ಬಾರಿಗೆ 13 ಸ್ಥಳೀಯ ಭಾಷೆಗಳಲ್ಲಿ ಸಿಆರ್‌ಪಿಎಫ್‌, ಬಿಎಸ್‌ಎಫ್‌ ಮತ್ತು ಸಿಐಎಸ್‌ಎಫ್‌ ಕಾನ್ಸ್‌ಟೆಬಲ್ ಪರೀಕ್ಷೆ ಬರೆಯಲು ಅವಕಾಶ

ಗೃಹ ಸಚಿವರಿಂದ ಅಧಿಕೃತ ಘೋಷಣೆ 

ಹೊಸದಿಲ್ಲಿ: ಹಿಂದಿ ಭಾಷೆ ಹೇರಿಕೆ ವಿರುದ್ಧಕೂಗು ಜೋರಾಗುತ್ತಿದ್ದ ಹೊತ್ತಲ್ಲಿ ಕೇಂದ್ರ ಸರಕಾರವು ಇದೇ ಮೊದಲ ಬಾರಿಗೆ ಕನ್ನಡವೂ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಕೇಂದ್ರ ಸಶಸ್ತ್ರ ಮೀಸಲು ಪಡೆಗಳಲ್ಲಿ (ಸಿಎಪಿಎಫ್) ಕಾನ್‌ಸ್ಟೆಬಲ್‌ ಹುದ್ದೆಯ ನೇಮಕಾತಿ ಪರೀಕ್ಷೆ ನಡೆಸಲಿದೆ. ಇದೊಂದು ಐತಿಹಾಸಿಕ ಕ್ರಮ ಎನಿಸಿ ಕೊಂಡಿದ್ದು, ರಾಷ್ಟ್ರ ಸೇವೆಯ ವೃತ್ತಿ ಜೀವನ ಆಯ್ಕೆ ಮಾಡಿ ಕೊಳ್ಳಲು ಲಕ್ಷಾಂತರ ಯುವಕರಿಗೆ ಸುವರ್ಣಾವಕಾಶ ಕಲ್ಪಿಸಲಿದೆ.

ಕೇಂದ್ರ ಸಶಸ್ತ್ರ ಮೀಸಲು ಪಡೆಗಳಾದ ಸಿಆರ್‌ಪಿಎಫ್, ಬಿಎಸ್‌ಎಫ್, ಸಿಐಎಸ್‌ಎಫ್‌ನ ಕಾನ್ಸ್‌ಟೆಬಲ್ (ಸಾಮಾನ್ಯ ಕರ್ತವ್ಯ) ಹುದ್ದೆ ನೇಮಕಾತಿ ಪರೀಕ್ಷೆಯು ಫೆ.10ರಿಂದ ಮಾ.7ರವರೆಗೆ 128 ನಗರಗಳಲ್ಲಿ ನಡೆಯಲಿದೆ. ಕನ್ನಡ, ಕೊಂಕಣಿ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಇದು ಕೇಂದ್ರ ಸಶಸ್ತ್ರ ಮೀಸಲು ಪಡೆಗಳಲ್ಲಿ ಕನ್ನಡಿಗರ ಆಯ್ಕೆ ಸಾಧ್ಯತೆ ಹೆಚ್ಚಿಸಲಿದೆ. ಕಳೆದ ಏಪ್ರಿಲ್‌ನಲ್ಲಿ ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿತ್ತಾದರೂ, ಭಾನು ವಾರ ಅಧಿಕೃತ ಘೋಷಣೆ ಮಾಡಿದೆ. ಈ ಹಿಂದೆ ಇಂಗ್ಲೀಷ್, ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿತ್ತು.

@48 ಲಕ್ಷ
ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು

@ಪೆ.10- ಮಾ.7
ಪರೀಕ್ಷೆ ನಡೆಯಲಿರುವ ಅವಧಿ 

128 ನಗರಗಳಲ್ಲಿ ಪರೀಕ್ಷೆ ಆಯೋಜನೆ

#ಯಾವ್ಯಾವ ಭಾಷೆಗಳಲ್ಲಿ ಪರೀಕ್ಷೆ?

ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲದೇ ಕನ್ನಡ, ಕೊಂಕಣಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ತಮಿಳು, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ಗೃಹ ಸಚಿವಾಲಯ ತಿಳಿಸಿದೆ.


#ಕನ್ನಡಿಗರಿಗೆ ಅವಕಾಶ ಹೆಚ್ಚಳ#

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಈ ಕಾನ್ಸ್‌ಟೆಬಲ್ ಹುದ್ದೆ ಪರೀಕ್ಷೆ ನಡೆಸ ಲಿದೆ. ಪರೀಕ್ಷೆಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸಲು ಎಸ್‌ಎಸ್‌ಸಿ ಮತ್ತು ಕೇಂದ್ರ ಗೃಹ ಸಚಿವಾಲಯವು ಒಪ್ಪಂದಕ್ಕೆ ಸಹಿ ಹಾಕಿವೆ. ಈ ನಿರ್ಧಾರದಿಂದ ಕನ್ನಡಿಗರೂ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ಯುವಕರು ತಮ್ಮ ಮಾತೃಭಾಷೆಗಳಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗಲಿದ್ದು, ಅವರ ಆಯ್ಕೆ ಸಾಧ್ಯತೆ ಗಳನ್ನು ಹೆಚ್ಚಿಸಲಿದೆ. ಪ್ರಾದೇಶಿಕ ಭಾಷೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

#ಯುಪಿಎಸ್‌ಸಿ ಪರೀಕ್ಷೆಗೆ 14ರಂದು ಅಧಿಸೂಚನೆ ಪ್ರಕಟ#

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗವು ಇದೇ ಫೆ.14 ರಂದು ಭಾರತೀಯ ನಾಗರಿಕ ಸೇವಾ ಪರೀಕ್ಷೆ ಮತ್ತು ಭಾರತೀಯ ಅರಣ್ಯ ಸೇವಾ ಪರೀಕ್ಷೆಗಳಿಗೆ ಅಧಿಸೂಚನೆ ಪ್ರಕಟಿಸಲಿದೆ. ಈಗಾಗಲೇ ಜನವರಿ ತಿಂಗಳಲ್ಲೇ 2024ನೇ ಸಾಲಿನ ಪ್ರಮುಖ ಅಧಿಸೂಚನೆ ಮತ್ತು ನೇಮಕ ಪರೀಕ್ಷೆಗಳ ಕುರಿತು ವಾರ್ಷಿಕ ವೇಳಾಪಟ್ಟಿ ಬಿಡುಗಡೆ ಮಾಡಿರುವ ಆಯೋಗವು ಫೆ.14ರಿಂದ ಮಾರ್ಚ್ 5ರ ತನಕ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದಾಗಿ ತಿಳಿಸಿದೆ. ಐಎಎಸ್ ಮತ್ತು ಐಎಫ್‌ಎಸ್ ಹುದ್ದೆಗಳಿಗೆ ಪ್ರಿಲಿಮಿನರಿ ಪರೀಕ್ಷೆಯು ಮೇ 26ರಂದು ನಡೆಯಲಿದೆ. ಮುಖ್ಯ ಪರೀಕ್ಷೆಯು ಈ ಎರಡೂ ಹುದ್ದೆಗಳಿಗೆ ಬೇರೆ ಬೇರೆಯಾಗಿ ನಡೆಯಲಿದ್ದು, ಅಕ್ಟೋಬ‌ರ್ನಲ್ಲಿ ಐಎಎಸ್ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಯನ್ನು ನಿರೀಕ್ಷಿಸಲಾಗಿದೆ. ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ 21 ರಿಂದ 32 ವರ್ಷದೊಳಗಿನವರು ನಾಗರಿಕ ಸೇವಾ ಪರೀಕ್ಷೆ ಬರೆಯುವ ಅವಕಾಶವಿರುತ್ತದೆ.

Comments