ತ್ರಿವಳಿ ಭಾರತ ರತ್ನ :- ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ

ನವದೆಹಲಿ: ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹ ರಾವ್‌, ಚೌಧರಿ ಚರಣ್ ಸಿಂಗ್ ಹಾಗೂ ಹಸಿರುಕ್ರಾಂತಿ ಹರಿಕಾರ, ಕೃಷಿ ವಿಜ್ಞಾನಿ ಎಂ.ಎಸ್ ಸ್ವಾಮಿನಾಥನ್ ಅವರಿಗೆ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ' ಘೋಷಿಸಲಾಗಿದೆ. ಕ್ರಾಂತಿಕಾರಿ ನೀತಿಗಳ ಮೂಲಕ ಭಾರತದ ಆರ್ಥಿಕ ಬೆಳವಣಿಗೆಗೆ ವೇಗ ನೀಡಿದ ಹಿರಿಯ ಕಾಂಗ್ರೆಸ್ ನಾಯಕ ಪಿ.ವಿ.ನರಸಿಂಹ ರಾವ್, ರೈತ ಹೋರಾಟಕ್ಕೆ ಹೆಸರಾದ ಮಾಜಿ ಪ್ರಧಾನಿ ಚರಣ್ ಸಿಂಗ್ ಹಾಗೂ 'ಹಸಿರು ಕ್ರಾಂತಿಯ' ಮೂಲಕ ದೇಶದ ಕೃಷಿ ವಲಯದ ದಿಕ್ಕು ಬದಲಿಸಿದ ವಿಜ್ಞಾನಿ ಸ್ವಾಮಿನಾಥನ್‌ ಅವರಿಗೆ ಮರಣೋತ್ತರ ವಾಗಿ ಈ ಪ್ರಶಸ್ತಿ ಸಂದಿದೆ.
ಪ್ರಧಾನಿ ಮೋದಿ ಅವರು ಶುಕ್ರವಾರ ಈ ವಿಷಯವನ್ನು ಪ್ರಕಟಿಸಿದ್ದು, ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ ಜ. 23ರಂದು ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂ‌ರ್ ಮತ್ತು ಫೆ.3ರಂದು ಬಿಜೆಪಿ ಹಿರಿಯ ನೇತಾರ ಎಲ್.ಕೆ. ಆಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಲಾಗಿತ್ತು. ಇದರೊಂದಿಗೆ 2024ರಲ್ಲಿ ಒಟ್ಟು ಐವರಿಗೆ 'ಭಾರತ ರತ್ನ' ಒಲಿದಂತಾಗಿದೆ. ಈ ಪೈಕಿ ಬಿಜೆಪಿಯೇತರ ನಾಯಕರಿಗೆ, ಅದರಲ್ಲೂ ಕಾಂಗ್ರೆಸ್ ನಿರ್ಲಕ್ಷ್ಯಕ್ಕೆ ಒಳಗಾದ ನಾಯಕರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ವಿಶೇಷ.

•|ನರಸಿಂಹ ರಾವ್‌|•
• ಭಾರತದ 9ನೇ ಪ್ರಧಾನಿ, ಭಾರತೀಯ ಆರ್ಥಿಕತೆ ಸುಧಾರಣೆಯ ಪಿತಾಮಹ ಎಂದೇ ಜನಪ್ರಿಯ
• 1991ರಲ್ಲಿ ರಾಜೀವ್ ಗಾಂಧಿ ಅಕಾಲಿಕ ಸಾವಿನಿಂದ ಕಾಂಗ್ರೆಸ್‌ನಿಂದ ಆಯ್ಕೆಯಾದ ಗಾಂಧಿಯೇತರ ಕುಟುಂಬದ ಮೊದಲ ಪ್ರಧಾನಿ
• ಹಿಂದಿಯೇತರ ಪ್ರದೇಶದ, ಅದರಲ್ಲೂ ದಕ್ಷಿಣ ಭಾರತದ ಮೊದಲ ಪ್ರಧಾನಿಯೂ ಹೌದು
• 90ರ ದಶಕದಲ್ಲಿ ರಾವ್ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳಿಂದ ದೇಶದ ಆರ್ಥಿಕತೆಯ ದಿಕ್ಕು ಬದಲು
 • 1921ರ ಜೂನ್ 28 ರಂದು ಅವಿಭಜಿತ ಆಂಧ್ರದ ವಂಗಾರದಲ್ಲಿ ಜನಿಸಿದ ನರಸಿಂಹ ರಾವ್ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿ.

•|ಸ್ವಾಮಿನಾಥನ್|•
• ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಖ್ಯಾತಿ ಪಡೆದ ಡಾ.ಎಂ.ಎಸ್.ಸ್ವಾಮಿನಾಥ್ 
• ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಮಹತ್ವದ ಪಾತ್ರ
• ಸಾಂಪ್ರದಾಯಿಕ ಭಾರತೀಯ ಕೃಷಿ ಪದ್ಧತಿಯು ಆಧುನಿಕತೆಯತ್ತ ಹೊರಳಲು ಕಾರಣ
• ಅಧಿಕ ಇಳುವರಿಯ ಭತ್ತ ಮತ್ತು ಗೋಧಿ ತಳಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ
• 1960ರ ದಶಕದಲ್ಲಿ ಭಾರತ, ಪಾಕ್‌ನಲ್ಲಿ ಬರಗಾಲದ ವೇಳೆ ಹಸಿವಿನಿಂದ ಕೋಟ್ಯಂತರ ಜನರ ರಕ್ಷಣೆಗೆ ನೆರವು
• 1925ರ ಆ. 7ರಂದು ತಮಿಳುನಾಡಿನ ಕುಂಬಕೋಣಂನಲ್ಲಿ ಜನನ.

•|ಚರಣ್ ಸಿಂಗ್|•
• ರೈತರ ಚಾಂಪಿಯನ್, ದೇಶದ 5ನೇ ಪ್ರಧಾನಿ, ಲೋಕದಳಕ್ಕೆ ಬುನಾದಿ ಹಾಕಿದ ಮುತ್ಸದ್ದಿ
• ಜಮೀನ್ದಾರಿಕೆ ಪದ್ಧತಿ ನಿಮೂರ್ಲನ ಕಾಯಿದೆ ಹಿಂದಿನ ಶಕ್ತಿ
• ಉತ್ತರಪ್ರದೇಶದ ಸಾಧಾರಣ ಕೃಷಿಕ ಕುಟುಂಬದಲ್ಲಿ ಜನನ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿ
• ಕಾಂಗ್ರೆಸ್‌ನಲ್ಲಿ ಸಕ್ರಿಯ ರಾಜಕಾರಣದ ಮೂಲಕ ಪ್ರಭಾವಿ ಹುದ್ದೆ ಅಲಂಕರಿಸಿದರು
• ಜಾಟರು, ಯಾದವರು, ಗುಜ್ಜರು ಹಾಗೂ ಕುರ್ಮಿಗಳ ಪಾಲಿಗೆ ಮಹಾ ನಾಯಕನಾಗಿ ಗುರುತಿಸಿಕೊಂಡರು
• ರೈತರ ಪರ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದರು.

Comments